ವೆನಿಜೂಲ
	ದಕ್ಷಿಣ ಅಮೆರಿಕದ ಉತ್ತರ ಭಾಗದಲ್ಲಿ ಕೆರಿಬಿಯನ್ ಸಮುದ್ರ ತೀರದಲ್ಲಿರುವ ಒಂದು ಗಣರಾಜ್ಯ. ವೆನಿಜೂಲ ಎಂದರೆ ಚಿಕ್ಕ ವೆನಿಸ್ ಎದರ್ಥ. ಉತ್ತರದಲ್ಲಿ ಕೆರಿಬಿಯನ್ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರ, ಪೂರ್ವದಲ್ಲಿ ಗುಯಾನ, ದಕ್ಷಿಣದಲ್ಲಿ ಬ್ರಜಿûಲ್ ಹಾಗೂ ನೈಋತ್ಯದಲ್ಲಿ ಕೊಲಂಬಿಯ ದೇಶಗಳಿವೆ. ಇದರ ವಿಸ್ತೀರ್ಣ 9,12,050 ಚ.ಕಿಮೀ. ಇದು ದಕ್ಷಿಣೋತ್ತರವಾಗಿ 1,271 ಕಿಮೀ ಉದ್ದ ಮತ್ತು ಪೂರ್ವ ಪಶ್ಚಿಮವಾಗಿ 1,489 ಕಿಮೀ ಅಗಲವಾಗಿದೆ. ವೆನಿಜûೂಲ ಹೊಂದಿರುವ ತೀರ ಪ್ರದೇಶದ ಉದ್ದ 2,816 ಕಿಮೀ. ಇಟಲಿಯ ನಾವಿಕನೊಬ್ಬ 1,494ರಲ್ಲಿ ಮಾರಾಕೈಬೊ ಕೊಲ್ಲಿಯ ತೀರದಲ್ಲಿ ಬಂದು ಇಳಿದಾಗ ವೆನಿಸ್ಸನ್ನು ಹೋಲುವುದೆಂದು  ವೆನಿಜûೂಲ ಎಂದು ಇದನ್ನು ಕರೆದ. ಅನಂತರ ಇದೇ ಹೆಸರು ರೂಢಿಗೆ ಬಂತು. ವೆನಿಜûೂಲದ ರಾಜಧಾನಿ ಕ್ಯಾರಕಾಸ್. ಭಾಷೆ ಸ್ಪ್ಯಾನಿಷ್. ಸಾಕ್ಷರತೆ 91%. ಜನ ಕ್ರೈಸ್ತ ಧರ್ಮಾನುಯಾಯಿಗಳು. ಇಲ್ಲಿಯ ನಾಣ್ಯ ಬೋಲಿವಾಕ್.

	ಭೌತಲಕ್ಷಣ : ವೆನಿಜûೂಲ ದೇಶವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು : 1) ಮಾರಾಕೈಬೊ ತಗ್ಗು ಪ್ರದೇಶ : ಇದು ವೆನಿಜûೂಲದ ವಾಯವ್ಯ ಭಾಗ. ಮಾರಾಕೈಬೊ, ದಕ್ಷಿಣ ಅಮೆರಿಕದ ಅತಿ ದೊಡ್ಡ ಸರೋವರ. ಈ ಭಾಗ ಅಪಾರ ತೈಲ ನಿಕ್ಷೇಪ ಹೊಂದಿದೆ. 2) ಆಂಡೀಸ್ ಉನ್ನತ ಪ್ರದೇಶ : ಮಾರಾಕೈಬೊ ತಗ್ಗು ಪ್ರದೇಶದ ಪೂರ್ವದಲ್ಲಿದೆ. ವೆನಿಜûೂಲದ ಉತ್ತರಭಾಗ ಇದು. ಉಪವಿಭಾಗಗಳೆಂದರೆ ಮೆರಿಡ ಶ್ರೇಣಿ, ಮಧ್ಯದ ಉನ್ನತ ಪ್ರದೇಶ ಮತ್ತು ಈಶಾನ್ಯದ ಎತ್ತರದ ನೆಲ. 3) ಲಾನೋಸ್ ಹುಲ್ಲುಗಾವಲು ಪ್ರದೇಶ: ಇದು ಆಂಡಿಯನ್ ಉನ್ನತ ಪ್ರದೇಶ ಹಾಗೂ ದಕ್ಷಿಣದ ಗುಯಾನ ಉನ್ನತ ಪ್ರದೇಶದ ನಡುವೆ ಇದೆ. ಓರಿನೋಕೊ ಮತ್ತು ಅದರ ಉಪನದಿಗಳು ಇಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತವೆ. ಓರಿನೋಕೊ ವೆನಿಜûೂಲದ ಅತಿ ಮುಖ್ಯ ನದಿ. ಇದಕ್ಕೆ ನೂರಾರು ಉಪನದಿಗಳಿವೆ. ಉಷ್ಣವಲಯದ ಹುಲ್ಲು ಗಾವಲುಗಳನ್ನು ವೆನಿ-ಲಾನೋಸ್ ಎಂದು ಕರೆಯುತ್ತಾರೆ. ಇಲ್ಲಿಯ ಮುಖ್ಯ ಕಸಬು ಪಶುಸಂಗೋಪನೆ. ಈ ವೃತ್ತಿಯ ಜನ ಲಾನೆರೋಸ್ ಎನಿಸಿಕೊಂಡಿದ್ದಾರೆ. 4) ಗುಯಾನ ಉನ್ನತ ಪ್ರದೇಶ: ವೆನಿಜûೂಲದ ದಕ್ಷಿಣದ ಬಹುಭಾಗವನ್ನು ಈ ಪ್ರಸ್ಥಭೂಮಿ ಆವರಿಸಿದೆ. ಪ್ರಪಂಚದ ಅತಿ ಎತ್ತರದ ಜಲಪಾತವಾದ ಎಜೆಲ್ ಇರುವುದು ಇಲ್ಲಿ. ಇದು ಓರಿನೋಕೊ ನದಿಯ ಉಪನದಿಯಾದ ರಯೋ ಚೂರುನ್‍ನ ಜಲಪಾತ. ಈ ಪ್ರಸ್ಥಭೂಮಿಯಲ್ಲಿ ಅಲ್ಲಲ್ಲಿ ರೆಡ್‍ಇಂಡಿಯನ್ ಬುಡಕಟ್ಟಿನ ಜನರು ವಾಸಿಸುವರು. ಈ ಪ್ರದೇಶದಲ್ಲಿ ಬಾಕ್ಸೈಟ್, ಕಬ್ಬಿಣದ ಅದುರು ಹಾಗೂ ಚಿನ್ನದ ನಿಕ್ಷೇಪಗಳಿವೆ.

	ವೆನಿಜûೂಲದ ಸೇಕಡ 80 ರಷ್ಟು ಭೂಪ್ರದೇಶ ಓರಿನೋಕೊ ನದಿಯ ಜಲಾನಯನ ಪ್ರದೇಶ. ಈ ನದಿ ಗುಯಾನ ಉನ್ನತ ಪ್ರದೇಶ, ಉತ್ತರದ ಸಿಯೆರ, ಆಂಡೀಸ್ ಮತ್ತು ಲಾನೋಸ್‍ಗಳಲ್ಲಿ ಹುಟ್ಟಿ ಹರಿಯುತ್ತವೆ. ವೆನಿಜûೂಲದಲ್ಲಿ ಸರೋವರಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಇವುಗಳಲ್ಲಿ ಮುಖ್ಯವಾದವು ಮಾರಾಕೈಬೊ, ಜೂಲಿಯ ಮತ್ತು ವಾಲ್‍ಎನ್‍ಷಿಯ. ಈ ದೇಶದ ಸಮುದ್ರ ತೀರ ಛಿದ್ರಗೊಂಡು ಅನೇಕ ಕೊಲ್ಲಿಗಳಿಂದ ಕೂಡಿದೆ. ಇವುಗಳಲ್ಲಿ ಮಾರಾಕೈಬೊ ಅತ್ಯಂತ ವಿಸ್ತಾರವಾದ ಕೊಲ್ಲಿ. ವೆನಿಜûೂಲ ತೀರದಲ್ಲಿ 71 ದ್ವೀಪಗಳಿವೆ.

	ವಾಯುಗುಣ : ವೆನಿಜûೂಲ ಉಷ್ಣವಲಯದಲ್ಲಿದೆ. ಮೇಲ್ಮೈ ವೈವಿಧ್ಯದಿಂದಾಗಿ ಇಲ್ಲಿಯ ವಾಯುಗುಣ ವಿಭಿನ್ನವಾದುದು. ಉತ್ತರ ಭಾಗದ್ದು ಉಷ್ಣವಲಯದ ಹುಲ್ಲುಗಾವಲು ವಾಯುಗುಣ. ಪರ್ವತ ಪ್ರದೇಶದ್ದು ತಂಪಿನ ವಾಯುಗುಣ. ಇಲ್ಲಿಯ ಸರಾಸರಿ ಉಷ್ಣಾಂಶ 190 ಸೆ. ಮಳೆಯ ಹಂಚಿಕೆಯಲ್ಲೂ ವ್ಯತ್ಯಾಸಗಳುಂಟು. ದೇಶದ ಪಶ್ಚಿಮ ಭಾಗದ ಪರ್ವತ ಪ್ರದೇಶ ಹಾಗೂ ದಕ್ಷಿಣದ ಗುಯಾನ ಪ್ರಸ್ಥಭೂಮಿಯಲ್ಲಿ ಮಳೆ 300 ಸೆಂಮೀಗಳಷ್ಟು ಅಧಿಕ. ಇತರ ಭಾಗಗಳಲ್ಲಿ ಸರಾಸರಿ ಮಳೆ 100 ಸೆಂಮೀ. ವೆನಿಜûೂಲದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ಭಾಗಗಳಲ್ಲಿ ಅರಣ್ಯಗಳಿವೆ. ಉತ್ತರ ಭಾಗ ಉಷ್ಣ ವಲಯ ಹುಲ್ಲುಗಾವಲು. ಕೆಲವು ಭಾಗಗಳಲ್ಲಿ ನಿತ್ಯ ಹರಿದ್ವರ್ಣದ ಸಸ್ಯಗಳೂ ಕಂಡುಬರುತ್ತವೆ.

	ಜನಸಂಖ್ಯೆ : ವೆನಿಜûೂಲ ಹೊಂದಿರುವ ಒಟ್ಟು ಜನಸಂಖ್ಯೆ 2.51 ಕೋಟಿ (1998). ಸೇಕಡ 90ರಷ್ಟು ಮಂದಿ ನಗರಗಳಲ್ಲಿ ವಾಸಿಸುತ್ತಾರೆ.  ವೆನಿಜûೂಲದ ರಾಜಧಾನಿ ಕ್ಯಾರಕಾಸ್ ದೇಶದ ಅತಿ ದೊಡ್ಡ ನಗರ. ಬಾರ್ಕ್‍ಕ್ವಿ ಸೈನೇಟೋ, ಸಿಯುದಾದ್ಯಾನ, ಮಾರಾಕೈಬೊ, ವ್ಯಾಲೆನ್ಷಿಯ ಇತರ ನಗರಗಳು. ವೆನಿಜûೂಲದ ಜನಸಂಖ್ಯೆ ಯುರೋಪಿಯನ್ ನಿಗ್ರೋ ಹಾಗೂ ರೆಡ್‍ಇಂಡಿಯನ್‍ರನ್ನು ಒಳಗೊಂಡಿದೆ. ಈ ಸಮೂಹಗಳು ಹೆಚ್ಚು ಮಿಶ್ರಗೊಂಡಿವೆ. 1500 ರವರೆಗೂ ರೆಡ್‍ಇಂಡಿಯನ್‍ರಿಂದ ಕೂಡಿದ್ದ ವೆನಿಜûೂಲವನ್ನು ಸ್ಪ್ಯಾನಿಷರು ಆಕ್ರಮಿಸಿಕೊಂಡರು. ಇವರು ನಿಗ್ರೋಗಳನ್ನು, ಗುಲಾಮರನ್ನು ಆಮದು ಮಾಡಿಕೊಂಡಿದ್ದು ಜನಾಂಗೀಯ ಮಿಶ್ರಣಕ್ಕೆ ಕಾರಣವಾಗಿದೆ. ದಕ್ಷಿಣ ಅಮೆರಿಕದ ಇತರ ದೇಶಗಳಿಗಿಂತ ವೆನಿಜûೂಲದಲ್ಲಿ ಜನಾಂಗೀಯ ಮಿಶ್ರಣ ಹೆಚ್ಚು. ರೋಮನ್ ಕೆಥೊಲಿಕ್‍ರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಪ್ಯಾನಿಷ್ ಇಲ್ಲಿಯ ಅಧಿಕೃತ ಭಾಷೆ. ಅಲ್ಲಲ್ಲಿ ಬುಡಕಟ್ಟು ಭಾಷೆಗಳನ್ನೂ ಆಡುವವರಿದ್ದಾರೆ.

	ಆರ್ಥಿಕತೆ : ವೆನಿಜûೂಲದ ಆರ್ಥಿಕತೆ ಇತರ ಲ್ಯಾಟಿನ್ ಅಮೆರಿಕ ದೇಶಗಳಿಗಿಂತ ಉತ್ತಮ. ತಲಾ ಆದಾಯವೂ ಹೆಚ್ಚು. ಇದಕ್ಕೆ ಕಾರಣ ಪೆಟ್ರೋಲಿಯಂ ಉತ್ಪಾದನೆ. ಆದರೆ ಸಂಪತ್ತು ಸಮಾನವಾಗಿ ಹಂಚಿಕೆಯಾಗಿರದೆ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಪೆಟ್ರೋಲಿಯಂ ಈ ದೇಶದ ಅತಿ ಮುಖ್ಯ ಪ್ರಾಕೃತಿಕ ಸಂಪನ್ಮೂಲ. ಮಾರಾಕೈಬೊ ಕಣಿವೆ ಹಾಗೂ ಲಾನೋಸ್‍ನ ಪೂರ್ವಭಾಗದಲ್ಲಿ ಪೆಟ್ರೋಲಿಯಂ ನಿಕ್ಷೇಪವಿದೆ. ನೈಸರ್ಗಿಕ ಅನಿಲ, ಬಾಕ್ಸೈಟ್, ಕಲ್ಲಿದ್ದಲು, ವಜ್ರ, ಚಿನ್ನ, ಜಿಪ್‍ಸಂ ಇಲ್ಲಿ ಸಿಗುವ ಇತರ ಖನಿಜಗಳು. ಗುಯಾನ ಉನ್ನತ ಪ್ರದೇಶದಲ್ಲಿ ಕರೋನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಗುರಿ ಅಣೆಕಟ್ಟು ಪ್ರಪಂಚದ ಅತಿ ದೊಡ್ಡ ಅಣೆಕಟ್ಟುಗಳಲ್ಲಿ ಒಂದು. ಇದರಿಂದ ಜಲವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ. ಪ್ರವಾಸೋದ್ಯಮ, ವ್ಯಾಪಾರ, ಕೈಗಾರಿಕೆ ಮತ್ತು ವ್ಯವಸಾಯ ಇಲ್ಲಿಯ ಮುಖ್ಯ ಆರ್ಥಿಕ ಚಟುವಟಿಕೆಗಳು.

	ವೆನಿಜûೂಲದ ಸೇ. 15ರಷ್ಟು ಜನರು ವ್ಯವಸಾಯದಲ್ಲಿ ತೊಡಗಿದ್ದಾರೆ. ಬಾಳೆ, ಕಾಫಿ, ಮೆಕ್ಕೆಜೋಳ, ಕಿತ್ತಳೆ ಮತ್ತು ಬತ್ತ ಇಲ್ಲಿಯ ಮುಖ್ಯ ಬೆಳೆಗಳು. ಪಶುಸಂಗೋಪನೆ ಮತ್ತು ಕೋಳಿಸಾಕಣೆ ಹೆಚ್ಚು ರೂಢಿಯಲ್ಲಿವೆ. 1970 ರಿಂದ ಈಚೆಗೆ ಇಲ್ಲಿ ಕೈಗಾರಿಕೆಗಳು ವೇಗವಾಗಿ ಅಭಿವೃದ್ಧಿ ಹೊಂದಿದೆ. ಪೆಟ್ರೋಲಿಯಂ ಸಂಸ್ಕರಣೆ ಮುಖ್ಯ ಉದ್ಯಮ. ಇವುಗಳನ್ನು ಆಧರಿಸಿ ಪೆಟ್ರೋ ರಾಸಾಯನಿಕ ಕೈಗಾರಿಕೆಗಳು ಅಭಿವೃದ್ಧಿ ಹೊಂದಿವೆ. ಮಾರಾಕೈಬೊ ಪ್ರಮುಖ ಪೆಟ್ರೋಲಿಯಂ ಶುದ್ಧೀಕರಣ ಕೇಂದ್ರ. ವೆನಿಜûೂಲದ ಇತರ ಮುಖ್ಯ ಕೈಗಾರಿಕಗಳೆಂದರೆ ಅಲ್ಯೂಮಿನಿಯಂ, ಸಿಮೆಂಟ್, ಉಕ್ಕು ಮತ್ತು ಜವಳಿ. ಬಹುತೇಕ ಕೈಗಾರಿಕೆಗಳು ನಗರಗಳಲ್ಲಿ ಕೇಂದ್ರೀಕೃತವಾಗಿವೆ. ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಅಲ್ಯೂಮಿನಿಯಮ್ ಇಲ್ಲಿಂದ ರಫ್ತಾಗುತ್ತವೆ.

	ಇತಿಹಾಸ ಮತ್ತು ಸರ್ಕಾರ: ವೆನಿಜûೂಲ ಮೂಲತಃ ರೆಡ್ ಇಂಡಿಯನ್ ಜನರಿಂದ ಕೂಡಿತ್ತು. ಇವರಲ್ಲಿ ಎರಡು ಪಂಗಡಗಳಿವೆ. ಕರೀಬ್ ಪಂಗಡದ ಜನ ವೆನಿಜûೂಲದ ಪೂರ್ವದಲ್ಲಿದ್ದಾರೆ. ಅರವಾಕ್ ಪಂಗಡ ಪಶ್ಚಿಮದಲ್ಲಿ ನೆಲಸಿದೆ. ಕೊಲಂಬಸ್ 1498ರಲ್ಲಿ ವೆನಿಜûೂಲಕ್ಕೆ ಬಂದಿದ್ದ. ಅನಂತರ ಸ್ಪ್ಯಾನಿಷರು ಇಲ್ಲಿ ನೆಲಸಲಾರಂಭಿಸಿದರು. ಗಣಿಗಳಿಂದ ಉಪ್ಪನ್ನು ತೆಗೆಯುತ್ತಿದ್ದರು. ಇಲ್ಲಿಗೆ ಬಂದ ಯುರೋಪಿಯನ್ನರು ತಮ್ಮೊಂದಿಗೆ ರೋಗಗಳನ್ನು ಇಲ್ಲಿಗೆ ತಂದು ಹರಡಿದರು. ರೆಡ್ ಇಂಡಿಯನ್ನರಿಗೆ ಪ್ರತಿರೋಧ ಸಾಮಥ್ರ್ಯವಿಲ್ಲದ್ದರಿಂದಾಗಿ ಯುದ್ಧದಲ್ಲಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಮರಣ ಹೊಂದಿದರು. 1800 ರಿಂದ ಇಲ್ಲಿಯ ಜನ ಸ್ವಾತಂತ್ರ್ಯಕ್ಕಾಗಿ ಹೋರಾಡತೊಡಗಿದರು. ವೆನಿಜûೂಲ ದಕ್ಷಿಣ ಅಮೆರಿಕದಲ್ಲಿ ಸ್ವಾತಂತ್ರ್ಯ ಪಡೆದ ಮೊದಲ ರಾಷ್ಟ್ರವಾಯಿತು. 1811ರ ಜುಲೈ 5 ರಂದು ಇದು ಸ್ವಾತಂತ್ರ್ಯ ಘೋಷಿಸಿಕೊಂಡಿತು. 1819ರಲ್ಲಿ ಬೋಲಿವಾರ್, ವೆನಿಜûೂಲ, ಕೊಲಂಬಿಯ, ಈಕ್ವೇಡಾರ್ ಹಾಗೂ ಪನಾಮಗಳು ಒಂದಾಗಿದ್ದುವು. 1829ರಲ್ಲಿ ವೆನಿಜûೂಲ ಪ್ರತ್ಯೇಕಗೊಂಡಿತು. ಜನರಲ್ ಜೋಸ್ ಆಂಟೋನಿಯೋ ಪಾಯೆಜ್ ವೆನಿಜûೂಲದ ಅಧ್ಯಕ್ಷರಾಗಿ ನೇಮಕಗೊಂಡರು.

	ಅನಂತರದಲ್ಲಿ ಹಲವು ನಿರಂಕುಶಾಧಿಕಾರಿಗಳು ವೆನಿಜûೂಲವನ್ನು ಆಳಿದರು. 1935ರಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಆರಂಭಗೊಂಡು 1947ರಲ್ಲಿ ರೋಮುಲೋ ಗಾಲ್ಲೇಗೋಸ್ ಅಧ್ಯಕ್ಷನಾದ. 1948ರಲ್ಲಿ ಪುನಃ ಸೈನಿಕ ಸರ್ವಾಧಿಕಾರ ಬಂತು. 1958ರಿಂದ ವೆನಿಜûೂಲದಲ್ಲಿ ಪ್ರಜಾಪ್ರಭುತ್ವವಿದೆ. ಈಗಿನ ಅಧ್ಯಕ್ಷರು ಹ್ಯೂಗೊ ಷಾವೆಜ್.	

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
	
	(ಆರ್.ಎನ್.)